ಉಪ್ಪು ತಿಂದವ ನೀರು ಕುಡಿಯಲೇಬೇಕು
ಉಪ್ಪು ಎಂದರೆ ರುಚಿ. ರುಚಿ ಎಂದು ಅದನ್ನು ಮಿತಿ ಮೀರಿ ತಿನ್ನಲು ಸಾಧ್ಯವಿಲ್ಲ.ಉಪ್ಪನ್ನು ಅತಿಯಾಗಿ ತಿಂದರೆ ರಕ್ತದೊತ್ತಡ ಹೆಹುತ್ತದೆ. ಉಪ್ಪು ತಿಂದಷ್ಟೂ ಬಾಯಾರಿಕೆ ಹೆಚ್ಚುತ್ತಲೇ ಹೋಗುತ್ತದೆ. ಅದರಿಂದ ನೀರು ಕುಡಿಯಲೇ ಬೇಕಾಗುತ್ತದೆ . ಅದರಂತೆ ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇಬೇಕು. ತಾನು ಮಡಿದ ತಪ್ಪು ಯಾರಿಗೂ ಗೊತ್ತಿಲ್ಲ, ಅದನ್ನು ತಡೆಹಿಡಿಯಲು ಯಾರಿಗೂ ಸಾಧ್ಯವಿಲ್ಲ, ತಾನು ಹೇಗೆ ಬೇಕಾದರೂ ಇರಬಹುದು, ಎಂದುಕೊಂಡೆಲ್ಲ ಬದುಕಲು ಸಾಧ್ಯವಿಲ್ಲ. ಅದು ಎಷ್ಟೇ ದೊಡ್ಡ ಅಪರಾಧವಾಗಿರಲಿ, ಅಥವಾ ಚಿಕ್ಕ ತಪ್ಪೇ ಆಗಿರಲಿ. ತಪ್ಪು ತಪ್ಪೇ .ಅದಕ್ಕೆ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ಎನ್ನುವುದು ಈ ಗಾದೆಯ ಒಳಾರ್ಥವಾಗಿದೆ.
ಕೃಪೆ:ವಿಜಯ ಕರ್ನಾಟಕ
ಮೂಗಿರುವ ತನಕ ನೆಗಡಿ ತಪ್ಪದು
ವ್ಯಕ್ತಿ ಎಷ್ಟೇ ಎಚ್ಚರವಹಿಸಿದರೂ, ಎಷ್ಟೇ ಪರಿಶುದ್ಧವಾದ ಗಾಳಿ, ನೀರು, ಆಹಾರ ಸೇವಿಸಿದರೂ ಹವಾಮಾನಕ್ಕೆ ತಕ್ಕಂತೆ ಉಲ್ಲನ್, ಕೋಟನ್ ಬಟ್ಟೆ ಧರಿಸಿದರೂ ರೋಗಾಣುಗಳು ಯಾವ ಮಾಯದಲ್ಲಾದರೂ ಬಂದು ದೇಹವನ್ನು ಸೇರಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಬಿಸಿಲು, ಚಳಿ, ಮಳೆಗೆ ಒಗ್ಗಿಕೊಳ್ಳದವರು ಬದುಕಲು ಸಾಧ್ಯವೇ ಇಲ್ಲ. ಜತೆಗೆ ಬರುವ ಕಾಯಿಲೆಗಳಿಗೆ ಸರಿಯಾಗಿ ಮದ್ದು ತೆಗೆದುಕೊಳ್ಳುತ್ತಾ ಗುಣಮುಖರಾಗಿ ಮುನ್ನಡೆಯಬೇಕಾಗಿದೆ. ಇದನ್ನು ಜೀವನದಲ್ಲಿ ಎದುರಾಗುವ ಕಷ್ಟಗಳಿಗೆ ಅನ್ವಯಿಸಬಹುದು. ಜೀವಮಾನವಿಡೀ ನೆಗಡಿ ಬಾರದ ವ್ಯಕ್ತಿ ಹೇಗೆ ಇರುವುದಿಲ್ಲವೋ ಅದರಂತೆ ಕಷ್ಟವನ್ನೇ ಕಾಣದವರು ಯಾರೂ ಇಲ್ಲ. ನೆಗಡಿ ಬಂತೆಂದು ಮೂಗು ಕೊಯ್ದು ಕೊಳ್ಳುವುದಿಲ್ಲವೋ ಹಾಗೇ ಕಷ್ಟ ಬಂದಿದೆ ಎಂದು ಬದುಕನ್ನು ಕಳೆದುಕೊಳ್ಳಬಾರದು. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ, ಪರಿಹರಿಸುತ್ತಾ ಜೀವನ ಸಾಗಿಸಬೇಕು ಎಂಬುದನ್ನು ಈ ಗಾದೆ ಹೇಳುತ್ತದೆ.
ಕೃಪೆ:ವಿಜಯ ಕರ್ನಾಟಕ
ತೋಟ ನೋಡಲು ಸುಂದರವಾಗಿದ್ದರೆ ಸಾಲದು ತೋಟದಲ್ಲಿ ಉಪಯುಕ್ತ ಬೆಳೆಗಳನ್ನು ಬೆಳೆಯುವಂತಿರಬೇಕು. ಆಗಲೇ ತೋಟ ಲಾಭಧಾಯಕ. ಈ ಗಾದೆ ಜಗತ್ತಿನಲ್ಲಿ ಕೆಲವರು ನಡೆದುಕೊಳ್ಳುವ ರೀತಿಯನ್ನು ಮರೆಮಾಚದೇ ಹೇಳುತ್ತದೆ. ಕೆಲವರು ಇತರರನ್ನು ಮೆಚ್ಚಿಸಲೆಂದೇ ಬದುಕಲು ನೋಡುತ್ತಾರೆ. ಸಂಪಾದನೆ ಕಡಿಮೆ ಇದ್ದರೂ ಸಾಲವನ್ನದರೂ ಮಾಡಿ ಬಂದ ಹಣವನ್ನು ಧಾರಾಳವಾಗಿ ಖರ್ಚು ಮಾಡಿ ಮನೆಯನ್ನು ಶೃಂಗಾರ ಮಾಡುತ್ತಾರೆ. ಆದರೆ ಕೊನೆಯಲ್ಲಿ ಸಾಲವನ್ನು ತೀರಿಸಲಾಗದೆ ಪರಿತಪಿಸುತ್ತಾರೆ. ತಾವು ಒಂದು ಹೊತ್ತು ಊಟ ಮಾಡುತ್ತಿದ್ದರೂ ಸರಿ, ಇತರರು ತಮ್ಮನ್ನು ಸಿರಿವಂತರೆಂದು ತಿಳಿಯಬೇಕೆಂದು ಆಶಿಸುತ್ತಾರೆ. ಆದರೆ ಮನೆಯಲ್ಲಿ ಮಾತ್ರ ಕಷ್ಟದ ಬದುಕು ಬದುಕುತ್ತಿರುತ್ತಾರೆ. ಹೀಗೆ ಮಾಡುವುದು ಅನಗತ್ಯ. ಸಿರಿವಂತನಾಗುವ ಅರ್ಹತೆಯನ್ನು ಪಡೆದು ಮನೆ ಸಿಂಗರಿಸಿದಂತೆ, ನಮ್ಮ ಆಚಾರ ವಿಚಾರಗಳು ಪಕ್ವವಾಗುವಂತೆ ನೋಡಿಕೊಳ್ಳಬೇಕು ಎಂಬುದನ್ನು ಗಾದೆ ವಿವರಿಸುತ್ತದೆ.
ಕೃಪೆ:ವಿಜಯ ಕರ್ನಾಟಕ
ನಾಳೆ ಎಂದವನ ಮನೆ ಹಾಳು
ನಾಳೆ ಎನ್ನುವುದು ಭವಿಷ್ಯ. ಭವಿಷ್ಯದಲ್ಲಿ ಏನಿದೆ ಎಂದು ಯಾರಿಂದ ಕೂಡ ಹೇಳಲು ಸಾದ್ಯವಿಲ್ಲ. ಅಷ್ಟೇಕೆ ನಾಳೆ ನಾವು ಜೀವಸಹಿತ ಇರುತ್ತೇವೆಯೋ ಇಲ್ಲವೋ ಎಂಬುದು ನಮಗೆ ಗೊತ್ತಿರುವುದಿಲ್ಲ. ನಿನ್ನೆ ಮುಗಿದುಹೋದ ದಿನ. ನಾಳೆ ಇನ್ನೂ ಬರದ ದಿನ. ಇಂದು ನಿಮ್ಮ ಕೈಯಲ್ಲಿದೆ. ಅದು ವರ್ತಮಾನ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎನ್ನುತ್ತಾರೆ ಬಲ್ಲವರು. ಆದುದರಿಂದ ನಾವು ಯಾವುದೇ ಕೆಲಸವನ್ನು ಮುಂದೂಡಬಾರದು. ಇಂದಿನ ಕೆಲಸವನ್ನು ಇಂದೇ ಮಾಡಬೇಕು. ಇಲ್ಲವಾದರೆ ಕೆಲಸದ ಪ್ರಮಾಣ ಹೆಚುತ್ತದೆ, ಸಮಯ, ಶ್ರಮ ,ಎರಡೂ ವ್ಯರ್ಥವಾಗುತ್ತದೆ. ಒತ್ತಡದಲ್ಲಿ ಯಾವುದನ್ನೂ ಸರಿಯಾಗಿ ಮಾಡಲು ಆಗುವುದಿಲ್ಲ. ಆದ್ದರಿಂದ ಇಂದಿನ ಕೆಲಸವನ್ನು ಇಂದೇ ಮಾಡುವುದು ಸೂಕ್ತ ಎಂಬುದು ಈ ಗಾದೆಯ ಒಳಾರ್ಥವಾಗಿದೆ.
ಕೃಪೆ:ವಿಜಯ ಕರ್ನಾಟಕ
No comments:
Post a Comment